ಮೌನಧ್ಯಾನ

Age 22

ರಾಗವೇ ನೀನಾದೆಯೋ?
ರಾಗಮಾಲಿಕಾಧರನಾದ ವನಮಾಲಿಯನ್ನೇ ಸ್ತುತಿಸುವ ಸೌಭಾಗ್ಯ ನಿನ್ನದಾಯಿತೋ?

ಪರಮಹಂಸರ ಮಾನಸದಲ್ಲಿ ವಿಹರಿಸುವ ಹಂಸಧ್ವನಿ ನೀನಾದೆಯೋ?
ಚಾರುಕೆಶಿಯ ಅಂತರಂಗ ಲಹರಿಗೇ ಸ್ವರವಾಗುವ ಸೌಭಾಗ್ಯ ನಿನ್ನದಾಯಿತೋ?

ಆಭೀರರು ಮೈಮರೆತು ಹಾಡಿದ ಅಭೇರಿ ನೀನಾದೆಯೋ?
ಮೋಹನರೂಪಿ ಗಾನಮೂರ್ತಿಯನ್ನೇ ಕೊಂಡಾಡುವ ಸೌಭಾಗ್ಯ ನಿನ್ನದಾಯಿತೋ?

ವಸಂತಗಳ ವಸಂತ ಕಲ್ಯಾಣವಸಂತ ನೀನಾದೆಯೋ?
ಖರಹರನಿಗೇ ಪ್ರಿಯನಾಗುವ ಸೌಭಾಗ್ಯ ನಿನ್ನದಾಯಿತೋ?

ಗೀರ್ವಾಣಿಯ ವಾಗ್ಝರಿಯಲ್ಲಿ ಹರಿಯುವ ಕೀರವಾಣಿ ನೀನಾದೆಯೋ?
ಪೂರ್ಣಷಡ್ಜದಲ್ಲಿ ಲೀನವಾಗಿ ಪೂರ್ಣತ್ವಕ್ಕೇ ಏರಿದ ಸೌಭಾಗ್ಯ ನಿನ್ನದಾಯಿತೋ?

ಶೀನಿವಾಸನನ್ನು ಒಲಿಸಿದ ಶ್ರೀನಿವಾಸ ನೀನಾದೆಯೋ?
ಶ್ರೀನಿವಾಸನನ್ನೇ ಸೇರುವ ಸೌಭಾಗ್ಯ ನಿನ್ನದಾಯಿತೋ?

Advertisements